ಜಿಗ್ 2 -

	ಕಾರ್ಖಾನೆಗಳಲ್ಲಿ ಒಂದೇ ರೀತಿಯ ಹಲವು ಘಟಕಗಳನ್ನು ತಯಾರಿಸಬೇಕಾದಾಗ ಬಳಸುವ ಹತ್ಯಾರು.                     ಇದು ಮಾಡುವ ಮುಖ್ಯ ಕಾರ್ಯಗಳನ್ನು ಹೀಗೆ ಹೆಸರಿಸಬಹುದು :
          1. ಘಟಕಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಸ್ಥಿತಿಯಲ್ಲಿ ಸುಭದ್ರವಾಗಿ ಹಿಡಿದಿಡುತ್ತದೆ.
          2. ಒಂದು ಅಥವಾ ಹಲವು ಕರ್ತನೋಪಕರಣಗಳ ಚಲನೆಗಳನ್ನು ನಿರ್ದೇಶಿಸುತ್ತದೆ, ನಿಯಂತ್ರಿಸುತ್ತದೆ ಮತ್ತು ಮಿತಗೊಳಿಸುತ್ತದೆ.
ಒಂದು ಜಿಗ್ಗಿನಲ್ಲಿ ಸಾಮಾನ್ಯವಾಗಿ ಈ ನಾಲ್ಕು ಅಂಗಭಾಗಗಳು ಇರುವುವು:
         1. ಸುಭದ್ರವಾಗಿ ಹಿಡಿದಿಟ್ಟುಕೊಳ್ಳುವ ಅಂಗಭಾಗಗಳು.
         2. ಘಟಕಗಳನ್ನು ಆಧರಿಸುವ ಅಂಗಭಾಗಗಳು.
         3. ಸ್ಥಾನ ನಿರ್ದೇಶನ ಮಾಡುವ ಅಂಗಭಾಗಗಳು.
         4. ಕರ್ತನೋಪಕರಣಗಳ ಚಲನೆಯನ್ನು ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮಿತಗೊಳಿಸುವ ಅಂಗಭಾಗಗಳು.

ಜಿಗ್ಗಿನ ಬಳಕೆಯಿಂದಾಗಿ ಘಟಕಗಳನ್ನು ತಯಾರಿಸಲು ಪಡಬೇಕಾದ ಶ್ರಮದ ಪರಿಮಾಣ, ಕೆಲಸವನ್ನು ಮುಗಿಸಲು ತಗಲುವ ಕಾಲಾವಧಿ ಮತ್ತು ತಯಾರಿಕೆಯ ವೆಚ್ಚಗಳು ಕಡಿಮೆಯಾಗುತ್ತವೆ. ಒಂದು ಘಟಕದ ಮೇಲೆ ಸಮ ದೂರದಲ್ಲಿ ಐವತ್ತು ತೂತುಗಳನ್ನು ಕೊರೆಯಬೇಕಾಗಿದೆ ಮತ್ತು ಇಂಥ ಸಾವಿರಾರು ಘಟಕಗಳನ್ನು ತಯಾರಿಸಬೇಕಾಗಿದೆ ಎಂದು ಭಾವಿಸೋಣ. ಘಟಕಗಳ ಮೇಲೆ ಗುರುತುಗಳನ್ನು ಮಾಡಿಕೊಂಡು, ಬಳಿಕ ಗುರುತುಗಳಿಗೆ ಸರಿಯಾಗಿ ತೂತುಗಳನ್ನು ಕೊರೆಯುತ್ತ ಹೋದರೆ, ಕೆಲಸವನ್ನು ಸಂಪೂರ್ಣಗೊಳಿಸಲು ದೀರ್ಘ ಕಾಲಾವಧಿ ಮತ್ತು ಅಧಿಕ ವೆಚ್ಚ ತಗುಲುವುವು.  ಹೀಗೆ ಮಾಡುವ ಬದಲು, ಜಿಗ್ ಎಂಬ ಹತ್ಯಾರನ್ನು ಬಳಸಿದರೆ, ಅಲ್ಪ ಕಾಲಾವಧಿಯಲ್ಲಿ ಒಂದೇ ರೀತಿಯ ಸಾವಿರಾರು ಘಟಕಗಳನ್ನು ತಯಾರಿಸಬಹುದು. ತಯಾರಿಸಬೇಕಾದ ಘಟಕದಲ್ಲಿ ಎಷ್ಟೆಷ್ಟು ದೂರದಲ್ಲಿ ಯಾವ ಯಾವ ಗಾತ್ರದ ತೂತುಗಳಿರಬೇಕು ಎಂಬುದನ್ನು ನಿರ್ಧರಿಸಿ, ಅದೇ ರೀತಿಯ ತೂತುಗಳನ್ನು ಜಿಗ್ಗಿನಲ್ಲಿ ಮೊದಲು ಕೊರೆಯಬೇಕು. ಈ ಜಿಗ್ಗನ್ನು ಘಟಕದೊಡನೆ ಭದ್ರವಾಗಿ ಜೋಡಿಸಿದ ಬಳಿಕ, ಜಿಗ್ಗಿನಲ್ಲಿ ಮಾಡಲ್ಪಟ್ಟಿರುವ ಎಲ್ಲ ತೂತುಗಳ ಮೂಲಕ ಕೊರೆಯುವ ಶಸ್ತ್ರಗಳನ್ನು ನಡೆಸಬೇಕು.  ಆಗ ಜಿಗ್ಗಿನಲ್ಲಿರುವಷ್ಟೇ ಸಂಖ್ಯೆಯ, ಅಷ್ಟೇ ಪ್ರಮಾಣದ, ಅಷ್ಟಷ್ಟೇ ದೂರದಲ್ಲಿರುವ ತೂತುಗಳು ಘಟಕದಲ್ಲೂ ಉಂಟಾಗಿರುತ್ತವೆ.  ತಯಾರಿಸಬೇಕಾದ ಘಟಕದ ಆಕಾರ ಮತ್ತು ರೀತಿಗೆ ಅನುಗುಣವಾಗಿ ಜಿಗ್ ತಯಾರಿಸಲ್ಪಡುತ್ತದೆ. ಒಂದು ಘಟಕವನ್ನು ತಯಾರಿಸಲು ಕೆಲವೊಮ್ಮೆ ಹಲವಾರು ಜಿಗ್ಗುಗಳೂ ಆವಶ್ಯಕವೆನಿಸಬಹುದು.

	ಜಿಗ್ಗುಗಳಲ್ಲಿ ಹಲವು ರೀತಿಯವುಗಳಿವೆ: ತೂತುಗಳನ್ನು ಕೊರೆಯುವಂಥವು, ಘಟಕಗಳನ್ನು ನಿರ್ದಿಷ್ಟ ಕೋನಕ್ಕೆ ಬಗ್ಗಿಸಿವಂಥವು, ಕಿಂಡಿಗಳನ್ನು ಕೊರೆಯುವಂಥವು, ತಲಗಳನ್ನು ನಯಗೊಳಿಸಿವಂಥವು, ನಿರ್ದಿಷ್ಟವಾಗಿ ಗುರುತು ಮಾಡುವಂಥವು, ಇತ್ಯಾದಿ. ಘಟಕದ ಬೇರೆ ಬೇರೆ ತಲಗಳಲ್ಲಿ ತೂತುಗಳನ್ನು ಕೊರೆಯಲು ಪೆಟ್ಟಿಗೆಯ ರೂಪದಲ್ಲಿರುವ ಜಿಗ್ಗುಗಳ ಬಳಕೆ ಉಂಟು. ಈ ರೀತಿಯ ಜಿಗ್ಗಿನ ಎರಡು ಮೂರು ತಲಗಳಲ್ಲೂ ತೂತುಗಳಿರುತ್ತವೆ. ಇವುಗಳ ಮೂಲಕ ಶಸ್ತ್ರಗಳನ್ನು ನಿರ್ದೇಶಿಸಿ, ಘಟಕದ ಹಲವು ತಲಗಳಲ್ಲಿ ತೂತುಗಳನ್ನು ಕೊರೆಯುವುದು ಸಾಧ್ಯ. ವೃತ್ತಾಕಾರದ ಫಲಕದ ಪರಿಧಿಯಲ್ಲಿ ತೂತುಗಳನ್ನು ಕೊರೆಯಲು ಆವರ್ತಕ ಜಿಗ್ಗುಗಳನ್ನು ಬಳಸುವರು. ಒಂದು ತೂತನ್ನು ಕೊರೆದಾದ ಮೇಲೆ, ಇನ್ನೊಂದನ್ನು ಕೊರೆಯಲು ಅನುಕೂಲವಾಗುವಂತೆ ಈ ಜಿಗ್ಗುಗಳು ತಿರುಗಿಸಲ್ಪಡುತ್ತವೆ.

    ಜಿಗ್ಗುಗಳನ್ನು ಬಳಸುವ ಉದ್ದೇಶ ಮತ್ತು ಅವುಗಳಿಂದಾಗುವ ಲಾಭಗಳು : 
1. ನಿರ್ದಿಷ್ಟ ಕಾಲಾವಧಿಯಲ್ಲಿ ಹೆಚ್ಚು ಸಂಖ್ಯೆಯ ಘಟಕಗಳನ್ನು ತಯಾರಿಸುವ ಸಾಧ್ಯತೆಯಿಂದಾಗಿ ತಯಾರಿಕೆಯಲ್ಲಿ ಮಿತವ್ಯಯ ಸಾಧಿಸಲ್ಪಡುತ್ತದೆ. ಜಿಗ್ಗುಗಳನ್ನು ಬಳಸುವುದರಿಂದ, ಕುಶಲಕರ್ಮಿಗಳ ಆವಶ್ಯಕತೆ ಕಡಿಮೆಯಾಗಿ ಸಾಮಾನ್ಯ ಕೆಲಸಗಾರರಿಂದಲೇ ಉತ್ತಮ ಘಟಕಗಳನ್ನು ತಯಾರಿಸುವುದು ಸಾಧ್ಯವೆನಿಸುವುದು. ಮಿತವ್ಯಯಕ್ಕೆ ಇದೂ ಒಂದು ಕಾರಣವಾಗುತ್ತದೆ. 2.  ತಯಾರಿಸಲ್ಪಟ್ಟ ಘಟಕಗಳ ನಿಖರತೆ ಜಿಗ್ಗುಗಳ ಬಳಕೆಯಿಂದ ದೊರೆಯುವ ಇನ್ನೊಂದು ದೊಡ್ಡ ಲಾಭ. 3. ಜಿಗ್ಗುಗಳ ಬಳಕೆಯಿಂದಾಗಿ ಒಂದು ಸಾಧನದ ವಿವಿಧ ಅಂಗಭಾಗಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಏಕಕಾಲದಲ್ಲಿ ತಯಾರಿಸುವುದು ಸಾಧ್ಯವಾಗುತ್ತದೆ. ಜಿಗ್ಗುಗಳು ಬಳಕೆಗೆ ಬರುವ ಮೊದಲು ಈ ರೀತಿಯ ಸೌಲಭ್ಯವಿರುತ್ತಿರಲಿಲ್ಲ.  ಆಗ ಬಿಡಿ ಭಾಗಗಳನ್ನು ಒಂದರ ಬಳಿಕ ಒಂದರಂತೆ ತಯಾರಿಸಬೇಕಾಗುತ್ತಿತ್ತು.  ಒಂದು ಬಿಡಿಭಾಗದ ಕೆಲಸವೇನಾದರೂ ಅಸಂಪೂರ್ಣವಾಗಿ ನಿಂತುಬಿಟ್ಟರೆ, ಆಗ ಅದಕ್ಕೆ ಪೂರಕವಾದ ಇತರ ಎಲ್ಲ ಅಂಗಭಾಗಗಳ ಕೆಲಸಗಳೂ ನಿಂತುಹೋಗುತ್ತಿದ್ದುವು. ಇಂಥ ಅನನುಕೂಲತೆಗಳನ್ನು ಜಿಗ್ಗುಗಳ ಬಳಕೆ ಹೋಗಲಾಡಿಸಿದೆ. 							(ಕೆ.ಸಿ.ಜಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ